ಎನ್.ಸಿ.ಸಿ ಎಂಬ
ಹೆಸರಿನಿಂದಲೇ ಜನಪ್ರಿಯವಾಗಿರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಭಾರತದ
ಶಾಲಾ-ಕಾಲೇಜುಗಳನ್ನು ಕೇಂದ್ರೀಕರಿಸಿಕೊಂಡು ಕಾರ್ಯಾಚರಿಸುತ್ತಿರುವ ಸ್ವಯಂಪ್ರೇರಿತ
ಸಂಘಟನೆಯಾಗಿದೆ. ಇದು 1948 ರಲ್ಲಿ ಭಾರತದ ಸಂಸತ್ತಿನ 31 ನೇ ಕಾಯ್ದೆಯಾದ ʻಎನ್.ಸಿ.ಸಿ
ಕಾಯ್ದೆʼಯ ಅಡಿಯಲ್ಲಿ ಜ್ಯಾರಿಯಾಯಿತು. ʻಏಕತೆ ಮತ್ತು ಶಿಸ್ತುʼ ಇದರ ಧ್ಯೇಯವಾಕ್ಯ.
ಎನ್.ಸಿ.ಸಿ ಯು ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯದ ನಿರ್ದೇಶನದಂತೆ
ಕಾರ್ಯಾಚರಿಸುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ದೈಹಿಕ ಸಾಮರ್ಥ್ಯ ಮತ್ತು
ದೇಶಭಕ್ತಿಯನ್ನು ರೂಪಿಸುವಂತಹ ಸುಸಜ್ಜಿತವಾದ ಪಠ್ಯಕ್ರಮ ಹಾಗೂ ತರಬೇತಿ ಸಂಪ್ರದಾಯವನ್ನು
ಎನ್.ಸಿ.ಸಿ ಅಳವಡಿಸಿಕೊಂಡಿದೆ. ಪ್ರಸ್ತುತ ಎನ್.ಸಿ.ಸಿಯು ಭಾರತದ ಶಿಕ್ಷಣ ಪದ್ಧತಿಯಲ್ಲಿ
ಪಠ್ಯೇತರ ವಿಷಯ ಎಂಬಂತೆ ಬೋಧನೆ ಮಾಡಲಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿರುವಾಗಲೇ
ಭಾರತದ ಸೈನಿಕ ವ್ಯವಸ್ಥೆಯ ಸಮಗ್ರ ಪ್ರಾಯೋಗಿಕ ಪರಿಚಯಕ್ಕೆ ಎನ್.ಸಿ.ಸಿಯು ವಿಶಾಲವಾದ
ಅವಕಾಶ ನೀಡುತ್ತದೆ. ಈ ಮೂಲಕ ಭಾರತದ ಸೈನ್ಯವನ್ನು ಹತ್ತಿರದಿಂದ ನಿರೀಕ್ಷಿಸುವಲ್ಲಿ ಹಾಗೂ
ಸೈನ್ಯದಲ್ಲಿ ಉತ್ತಮ ಉದ್ಯೋಗವನ್ನು ಕಂಡುಕೊಂಡು ಬದುಕನ್ನು ರೂಪಿಸುವಲ್ಲಿ
ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡುತ್ತದೆ. ಭಾರತದ ಪ್ರದಾನಮಂತ್ರಿ ಸನ್ಮಾನ್ಯ ಶ್ರೀ
ನರೇಂದ್ರ ಮೋದಿಯವರು, ರಾಜ್‌ನಾಥ್ ಸಿಂಗ್, ಸುಷ್ಮ ಸ್ವರಾಜ್, ಹಮೀದ್ ಅನ್ಸಾರಿ,
ಗುಲಾಂ ನಬೀ ಆಜಾದ್ ಮೊದಲಾದ ರಾಜಕೀಯ ನೇತಾರರು ಎನ್.ಸಿ.ಸಿ ಕೆಡೆಟ್‌ಗಳಾಗಿದ್ದರು ಎಂಬ
ವಿಷಯ ಗಮನಾರ್ಹವಾಗಿದೆ. ಪ್ರಸಿದ್ಧ ಕ್ರೀಡಾಪಟುಗಳಾದ ಹಿಮಾ ದಾಸ್, ಅಂಜಲಿ ಭಗ್‌ವತ್,
ತೇಜಸ್ವಿನಿ ಸಾವಂತ್, ರಾಜ್ಯವರ್ಧನ್ ಸಿಂಗ್ ರಾಥೋಡ್ ಮೊದಲಾದ ಅನೇಕರು ಎನ್.ಸಿ.ಸಿ
ಮೂಲದವರು. ಭಾರತದ ಮೊದಲ ಐ.ಪಿ.ಎಸ್ ಅಧಿಕಾರಿಯಾದ ಕಿರಣ್ ಬೇಡಿಯವರು ಕೂಡ ಎನ್.ಸಿ.ಸಿಯ
ಕೆಡೆಟ್ ಆಗಿದ್ದರು. ಇತರೆ ಸಂಘಟನೆಗಳಿಗಿಂತ ಭಿನ್ನವಾಗಿ 1947 ರಿಂದಲೇ ಎನ್.ಸಿ.ಸಿಯ
ಪ್ರವೇಶಾತಿಯಲ್ಲಿ 50:50 ನಿಷ್ಪತ್ತಿಯ ಸ್ತ್ರೀ-ಪುರುಷ ಲಿಂಗಾನುಪಾತಕ್ಕೆ
ಅವಕಾಶಮಾಡಿಕೊಟ್ಟಿದೆ.
ಮೂರು ವರ್ಷದ ಎನ್.ಸಿ.ಸಿ ಬದುಕು ಕ್ಷಣಿಕವಾದ ಅನುಭವಗಳ
ಕಂತೆಯಲ್ಲ. ಸುಂದರವಾದ ಭವಿಷ್ಯಕ್ಕಿರುವ ಮುನ್ನುಡಿಯೇ ಸರಿ. ಎನ್.ಸಿ.ಸಿಯ ವಿಶಾಲವಾದ
ಪಠ್ಯಕ್ರಮವು ಜಗತ್ತನ್ನು ವೈಜ್ಞಾನಿಕ ದೃಷ್ಟಿಯಿಂದ ಅವಲೋಕನೆ ಮಾಡಲು ಹಾಗೂ ನಮ್ಮ ದೇಶದ
ಚರಿತ್ರೆಯಲ್ಲಿ ಕುತೂಹಲ ಕೆರಳಿಸುವಂತೆಯೂ ಮಾಡುತ್ತದೆ. ನಾಗರಿಕ ಬದುಕಿನಲ್ಲಿ ಉತ್ತಮವಾದ
ಆಲೋಚನೆಯಿಂದ ಕ್ರಮಬದ್ಧವಾದ ಬದುಕನ್ನು ರೂಪಿಸುವಂತೆ ಮಾಡುವುದರಲ್ಲಿ ಎನ್.ಸಿ.ಸಿಯ
ಪ್ರಭಾವ ದೊಡ್ಡದು. ಎನ್.ಸಿ.ಸಿಯ ಶಿಬಿರಗಳಿಂದ ಕೆಡೆಟ್‌ಗಳು ಜೀವನದುದ್ದಕ್ಕೂ
ಅನಿರೀಕ್ಷಿತ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ, ಸರಳವಾಗಿ ಪರಿಹರಿಸಲು
ಸಹಕರಿಸುತ್ತದೆ. ಶಿಕ್ಷಣದ ಒಂದು ಹಂತ ಮುಗಿದ ಬಳಿಕ ಸಾಮಾನ್ಯವಾಗಿ ವಿದ್ಯಾರ್ಥಿಗಳು
ಉನ್ನತ ಶಿಕ್ಷಣದ ಮೊರೆಹೋಗುತ್ತಾರೆ. ಅಥವಾ ಜೀವನದ ಜವಾಬ್ದಾರಿಗಳನ್ನು ನಿಭಾಯಿಸಲು
ಉದ್ಯೋಗವನ್ನು ಅರಸುತ್ತಾರೆ. ಈ ಎರಡು ರೀತಿಯ ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ಸಹಾಯವಾಗುವ
ನಿಟ್ಟಿನಲ್ಲಿ ಭಾರತ ಸರಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಸರಕಾರದ ನಿರ್ದೇಶದಂತೆ
ದೇಶದ ಬಹುಪಾಲು ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಎನ್.ಸಿ.ಸಿ ಕೆಡೆಟ್‌ಗಳಿಗೆ
ಮೀಸಲಾತಿ ನೀಡುತ್ತಾ ಬಂದಿದೆ. ಅದೇ ರೀತಿ ಭಾರತದ ರಕ್ಷಣಾ ಇಲಾಖೆಯ ವಿವಿಧ ಹುದ್ದೆಗಳಲ್ಲಿ
ಎನ್.ಸಿ.ಸಿ ಕೆಡೆಟ್‌ಗಳಿಗೆ ಮೀಸಲಾತಿಗಳು ಲಭ್ಯವಿದೆ. ಹಲವು ಉದ್ಯೋಗಗಳ ಪ್ರವೇಶ
ಪರೀಕ್ಷೆಗಳಲ್ಲಿ ಎನ್.ಸಿ.ಸಿ ಕೆಡೆಟ್‌ಗಳಿಗೆ ಲಿಖಿತ ಪರೀಕ್ಷೆಯಿಂದ ವಿನಾಯಿತಿ
ನೀಡುವುದನ್ನು ಮತ್ತು ವಿಶೇಷ ಅಂಕಗಳನ್ನು ನೀಡುವುದು ಕಾಣಬಹುದು. ರಾಜ್ಯ ಸರಕಾರಗಳು ಕೂಡ
ಪೋಲಿಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಎನ್.ಸಿ.ಸಿ ಅಭ್ಯರ್ಥಿಗಳನ್ನು
ಬಯಸುತ್ತದೆ. ದೇಶದ ಹಲವಾರು ಖಾಸಗಿ ಕಂಪೆನಿಗಳು ಕೂಡ ಉದ್ಯೋಗಾರ್ಥಿಗಳ ಆಯ್ಕೆಯಲ್ಲಿ
ಎನ್.ಸಿ.ಸಿಯ ʻಸಿʼ ಸರ್ಟಿಫಿಕೇಟ್ ಕೆಡೆಟ್‌ಗಳನ್ನು ಪರಿಗಣಿಸುವುದರಿಂದ ಎನ್.ಸಿ.ಸಿಗೆ
ಇರುವ ಸಾರ್ವಜನಿಕ ಮಹತ್ವವನ್ನು ಅವಲೋಕಿಸಬಹುದು.
ಎನ್.ಸಿ.ಸಿ.ಯಿಂದ ಜೀವನದಲ್ಲಿ ಬದಲಾವಣೆ ಖಂಡಿತ....
ReplyDeleteಹೌದು ಸೀನಿಯರ್
Delete