CATC ಆಳ್ವಾಸ್ ಅನುಭವ - ಅಭಿಜಿತ್.ಕೆ.ಜೆ

ಬಹುಶಃ ಪ್ರತಿಯೊಬ್ಬ ಎನ್.ಸಿ‌.ಸಿ ಕೆಡೆಟ್‌ನ ಜೀವನದ ಅವಿಸ್ಮರಣೀಯ ಅಂಶವು ಕ್ಯಾಂಪ್ ಅನುಭವ ಎನ್ನುವುದು ನಾನು ಎನ್.ಸಿ.ಸಿ ಕ್ಯಾಂಪ್‌ನಲ್ಲಿ ಕಲಿತ ಮೊದಲ ವಿಚಾರ.

2020, 2021 ವರ್ಷಗಳಲ್ಲಿ ರಚನೆಯಾದ ಬಹುತೇಕ ಬರಹಗಳ ಮುನ್ನುಡಿಯಲ್ಲಿ ಕರೋನದ ಉಲ್ಲೇಖ ಕಾಣಬಹುದು. ಎನ್.ಸಿ.ಸಿಯ ಸೀನಿಯರ್ ವಿಂಗ್ ಮತ್ತು ಸೀನಿಯರ್ ಡಿವಿಶನ್ ಒಟ್ಟು ಮೂರು ವರ್ಷದ ಶಿಕ್ಷಣ ಅವಧಿಯನ್ನು ಹೊಂದಿದೆ. ಸಾಮಾನ್ಯವಾಗಿ ಮೊದಲ ವರ್ಷದ ಎನ್.ಸಿ.ಸಿ ಶಿಕ್ಷಣ ಕಾಲೇಜಿನ ಎನ್.ಸಿ.ಸಿ ಪರೇಡ್‌ಗೆ ಸೀಮಿತವಾಗಿರುತ್ತದೆ. ಮೊದಲ ವರ್ಷದಲ್ಲಿ ಹೊರಾಂಗಣ ಕ್ಯಾಂಪ್‌ನಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ. ಆದರೂ ಅಪರೂಪವಾಗಿ ಕೆಲವರಿಗೆ ಎನ್.ಸಿ‌.ಸಿ ಸೇರಿದ ವರ್ಷವೇ ಕ್ಯಾಂಪ್ ಭಾಗ್ಯವು ಒಲಿಯುತ್ತದೆ. ಕರೋನದ ಹಾವಳಿಯಿಂದ 2020 ರಲ್ಲಿನ ಕಾಲೇಜ್ ಎನ್.ಸಿ.ಸಿ ಪರೇಡ್‌ಗಳು ಆನ್‌ಲೈನ್ ಚಟುವಟಿಕೆಗಳಿಗೆ ಸೀಮಿತವಾಯಿತು. ಬೆಟಾಲಿಯನ್ ಹಂತದಿಂದ ತೊಡಗಿ ರಾಷ್ಟ್ರಮಟ್ಟದ ಹಲವು ಎನ್.ಸಿ.ಸಿ ಕ್ಯಾಂಪ್‌ಗಳು ರದ್ದುಗೊಳಿಸಲಾಯಿತು. ಕೆಲವು ಕ್ಯಾಂಪ್‌ಗಳನ್ನು ಸೀಮಿತ ಸಂಖ್ಯೆಯ ಕೆಡೆಟ್‌ಗಳಿಗಾಗಿ ನಡೆಸಲಾಯಿತು. ಹೀಗಾಗಿ ಎರಡನೇ ವರ್ಷದ ಎನ್.ಸಿ.ಸಿ ಅವಧಿಯಲ್ಲಿ ಕ್ಯಾಂಪ್ ಎನ್ನುವುದು ಕನಸು ಮಾತ್ರವಾಗಿತ್ತು. ಎರಡನೇ ವರ್ಷದ ಕೊನೆಯಲ್ಲಿ "ಬಿ" ಸರ್ಟಿಫಿಕೇಟ್ ಪರೀಕ್ಷೆ ಇರುವ ಕಾರಣದಿಂದ ಸಂಯುಕ್ತ ವಾರ್ಷಿಕ ತರಬೇತಿ ಕ್ಯಾಂಪ್ (CATC - Combined Annual Training Camp) ನಲ್ಲಿ ಭಾಗವಹಿಸುವುದು ಕಡ್ಡಾಯವಾಗಿತ್ತು. ಹೀಗಾಗಿ ನಮ್ಮ ಮಡಿಕೇರಿ ಬೆಟಾಲಿಯನ್ ಅದರ ವ್ಯಾಪ್ತಿಯ ಪ್ರತಿ ಕಾಲೇಜಿನಲ್ಲಿ 5 ದಿನದ CATC ನಡೆಸಿತು. ಆದರೂ ಆ ಕ್ಯಾಂಪ್‌ನಲ್ಲಿ ಕ್ಯಾಂಪ್ ಜೀವನದ ಅನುಭವಗಳನ್ನು ಪಡೆಯಲು ಯಾರಿಗೂ ಸಾಧ್ಯವಾಗಲಿಲ್ಲ; ಅದು ಕೇವಲ ತರಬೇತಿಗೆ ಮಾತ್ರ ಸೀಮಿತವಾಗಿತ್ತು.
ಹೀಗೆ ದಿನಗಳುರುಳಿ ನಾವು ಎನ್.ಸಿ.ಸಿಯ ಮೂರನೇ ವರ್ಷ ತಲುಪಿದಾಗ ಪ್ರತಿಷ್ಠಿತ RDC (Republic Day Camp) ಕ್ಯಾಂಪ್‌ಗೆ ಅಕ್ಟೋಬರ್ 16 ರಿಂದ ಎನ್.ಸಿ.ಸಿ ಮಂಗಳೂರು ಗ್ರೂಪ್‌ನ ವತಿಯಿಂದ RD Selection Camp ನಡೆಯಿತು. ನಮ್ಮ ಎನ್ನೆಂಸಿಯಿಂದ 9 ಕೆಡೆಟ್‌ಗಳು ಆಳ್ವಾಸ್‌ನಲ್ಲಿ ನಡೆಯುವ RD selection ಕ್ಯಾಂಪ್‌ಗೆ ಮಡಿಕೇರಿ ಬೆಟಾಲಿಯನ್‌ನ ಮೂಲಕ ಆಯ್ಕೆಯಾಗಿದ್ದರು. ನಮ್ಮ ಕಾಲೇಜಿನ‌ 9 ಕೆಡೆಟ್‌ಗಳು ಸೆಲೆಕ್ಷನ್‌ಗೆ ಆಳ್ವಾಸ್‌ಗೆ ಹೋದ ಬೆನ್ನಲ್ಲೇ, ಅಕ್ಟೋಬರ್‌ 26 ರಿಂದ ಆಳ್ವಾಸ್‌ನಲ್ಲಿ ನಡೆಯುವ CATC - II ರಲ್ಲಿ ಭಾಗವಹಿಸಲು ನಮ್ಮ ಕಾಲೇಜಿನ 6 (4 SD + 2 SW) ಕೆಡೆಟ್‌ಗಳಿಗೆ ಅವಕಾಶ ಬಂತು. ಅದರಲ್ಲಿ ನನಗೂ ಅವಕಾಶ ಸಿಕ್ಕಿತು. 26 ರಂದು ಕ್ಯಾಂಪ್‌ಗೆ ಹೋಗುವ ಸಲುವಾಗಿ 3-4 ದಿನದ ಹಿಂದೆಯೇ RT-PCR ಪರೀಕ್ಷೆ, Camp Form, Documents ಎಲ್ಲಾ ಸರಿ ಮಾಡಿ ಇಟ್ಟುಕೊಂಡಿದ್ದೆವು. ನಾವು 6 ಮಂದಿ ಒಟ್ಟಿಗೆ RT-PCR ಪರೀಕ್ಷೆ ಮಾಡಿಸಿದ್ದೆವು‌. ಆದರೆ ಗೆಳೆಯ ಮಿಥುನ್ ಮತ್ತು ನನ್ನ RT-PCR ವರದಿ ಎರಡು ದಿನ ಕಳೆದರೂ ಸಿಗಲಿಲ್ಲ. ತಾಲೂಕು ಆಸ್ಪತ್ರೆಯಲ್ಲಿ ವಿಚಾರಿಸಿದರೂ ಫಲ ಸಿಗಲಿಲ್ಲ. ಹೇಗೋ ಒದ್ದಾಡಿ ಕೊನೆಯ ಕ್ಷಣದಲ್ಲಿ ವರದಿ ಕೈಸೇರಿತು. 
ಅಕ್ಟೋಬರ್ 26 ಮಂಗಳವಾರ ನಾವು 6 ಜನ ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ 08.00 ಗಂಟೆಯ ಪುತ್ತೂರು ಬಸ್‌ನಲ್ಲಿ ಪ್ರಯಾಣ ಹೊರಟೆವು. 09.10 ಕ್ಕೆ ಪುತ್ತೂರು ಬಸ್ ನಿಲ್ದಾಣಕ್ಕೆ ತಲುಪಿದಾಗ ಪುತ್ತೂರಿನ ವಿವೇಕಾನಂದ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಕೆಡೆಟ್‌ಗಳು ಬಂದಿದ್ದರು. ಸುಮಾರು 10.30 ರ ಸುಮಾರಿಗೆ ಮಡಿಕೇರಿಯಿಂದ ಆಳ್ವಾಸ್‌ಗೆ ಹೋಗುವ ಸ್ಪೆಷ್ಯಲ್ ಬಸ್ ಬಂತು. ಬಸ್‌ನಲ್ಲಿ ಇದ್ದ ನಮ್ಮ ಬೆಟಾಲಿಯನ್‌ನ PI Staff ನಮ್ಮ ಹೆಸರನ್ನು ಪರಿಶೀಲನೆ ಮಾಡಿ ಬಸ್‌ ಏರಲು ಅನುವು ಮಾಡಿಕೊಟ್ಟರು. ಬಸ್‌ನಲ್ಲಿ CCG, FMKMC, PU Murnad, NMC, VC, SPC ಹೀಗೆ 6 ಕಾಲೇಜಿನ ಒಟ್ಟು 50 (30 SD + 20 SW) ಮಂದಿ ಕೆಡೆಟ್‌ಗಳು ಇದ್ದರು. ಒಬ್ಬರು PI Staff, CCG ಯ ANO ಕೂಡ ನಮ್ಮ ಜೊತೆ ಇದ್ದರು. ಪುತ್ತೂರಿನಿಂದ ಎರಡು ಗಂಟೆಗಳ ಪ್ರಯಾಣ. ಸುಮಾರು 12.30 ಕ್ಕೆ ಆಳ್ವಾಸ್ ಕ್ಯಾಂಪ್‌ಗೆ ಬಸ್ ಪ್ರವೇಶಿಸಿತು. ಒಂದೇ ಮಾತಿನಲ್ಲಿ ಹೇಳುವುದಾದರೆ ಗಡಿ ಸೀಮೆಗಳಿಲ್ಲದ ವಿಶಾಲ ಕ್ಯಾಂಪಸ್. ಬಸ್‌ನಿಂದ ಇಳಿದೆವು. ಜೊತೆಯಲ್ಲಿ ನಮ್ಮ ಬ್ಯಾಗ್‌ಗಳನ್ನೂ ಇಳಿಸಿದೆವು. ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮ ನಡೆಯುವ ತೆರೆದ ಸಭಾಂಗಣದ ಮೂಲೆಯಲ್ಲಿ ನಮ್ಮ ಬ್ಯಾಗ್‌ಗಳನ್ನು ಇರಿಸಿ ಅಲ್ಲೇ ಪಕ್ಕದಲ್ಲಿ‌ ನೆಲದಲ್ಲಿ ಕುಳಿತೆವು. ಅಷ್ಟರಲ್ಲೇ ಈ ಹಿಂದೆ selection camp ಗೆ ಹೋಗಿದ್ದ ನಮ್ಮ ಬೆಟಾಲಿಯನ್‌ನ ಎಲ್ಲಾ ಕೆಡೆಟ್‌ಗಳು ನಮ್ಮ ಬಳಿಗೆ ಬಂದು ಮಾತನಾಡಿಸಿದರು. ಕೆಲವು ನಿರ್ದೇಶನಗಳನ್ನು ಕೊಟ್ಟರು. RD Selection camp ನ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದ ಕೆಡೆಟ್‌ಗಳು ನಮ್ಮ ಆಗಮನದ ಪರಿವೇ ಇಲ್ಲದೆ; ಅಥವಾ ನಮ್ಮನ್ನು ಕಂಡೂ ಬಂದು ಮಾತನಾಡಿಸಲು ಆಗದಂತೆ ಸಾಬ್‌ನ ತರಬೇತಿಯ ಬಂಧನದಲ್ಲಿ ಇದ್ದರು. ನಾವು ಕುಳಿತಲ್ಲಿನಿಂದಲೇ ಅವರ ಡ್ರಿಲ್ ತರಬೇತಿ ನೋಡುತ್ತಾ ಕುಳಿತೆವು. ನಮ್ಮ ಕಾಲೇಜಿನ ನಾಲ್ವರು ಕೂಡ RDC ಯ ಮುಂದಿನ ಹಂತಕ್ಕೆ ಆಯ್ಕೆ ಆಗಿದ್ದರು. ಮುಂದಿನ ಹಂತಕ್ಕೆ ಆಯ್ಕೆಯಾದ ಕೆಡೆಟ್‌ಗಳಲ್ಲಿ ನಮ್ಮ ಕಾಲೇಜಿನ ನಾಲ್ವರು ಇದ್ದಾರೆ ಎಂದು ಅಲ್ಲಿದ್ದ ಇತರರಲ್ಲಿ ಹೇಳುವುದೇ ರೋಮಾಂಚಕ ಕ್ಷಣವಾಗಿತ್ತು. ಅಷ್ಟರಲ್ಲಿ PI staff ಗಳು ನಮ್ಮ ಹತ್ತಿರ ಬಂದು ನಮ್ಮ TA/DA ಅರ್ಜಿಯನ್ನು ಭರ್ತಿಗೊಳಿಸಲು ನಿರ್ದೇಶಿಸಿದರು. ಇತರೆ ಕಡತಗಳನ್ನು ಜೋಡಿಸಿ ಇಡುವಂತೆ ಹೇಳಿದರು. ನಂತರ ನಾವು ಸಾಲಾಗಿ ನಮ್ಮ ಕ್ಯಾಂಪ್ ಕಡತಗಳೊಂದಿಗೆ ನೋಂದಣಿ ವಿಭಾಗಕ್ಕೆ ಹೋದೆವು. ನಮ್ಮ CATC ಕ್ಯಾಂಪ್‌ನ್ನು ನಡೆಸುವ ಜವಾಬ್ದಾರಿ 21 ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಉಡುಪಿಯ ಕೈಯಲ್ಲಿತ್ತು. ಅಲ್ಲಿ ನೋಂದಣಿ ಪ್ರಕ್ರಿಯೆ ಮುಗಿಸಿದ ಬಳಿಕ ನಮ್ಮ ಹೆಬ್ಬೆರಳಿನ ಗುರುತನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿದರು. ನಂತರ ಸೀದ ಊಟದ ಸಾಲಿನೆಡೆಗೆ ಮುಖ ಮಾಡಿದೆವು. ಮಧ್ಯಾಹ್ನ ಸಸ್ಯಾಹಾರಿ ಊಟವಿತ್ತು, ಊಟದ ಜೊತೆಗೆ ಒಂದು ಐಸ್‌ಕ್ರೀಂ ಸಿಕ್ಕಿತು. ಊಟ ಚೆನ್ನಾಗಿತ್ತು. ಅಷ್ಟು ಬಿಟ್ಟರೆ ಆ ದಿನದ ಊಟದ ವಿಶೇಷ ಗ್ರಹಿಸುವ ತಾಳ್ಮೆ ಅಂದು ಇರಲಿಲ್ಲ. ನಾವು ಕ್ಯಾಂಪ್‌ನಿಂದ ಮರಳಿ ಬರುವ ತನಕ ರೂಂನಲ್ಲಿ ರಾತ್ರಿ 08.15 ರಿಂದ ಬೆಳಿಗ್ಗೆ 05.30 ರ ತನಕ ಬಿಟ್ಟು ಉಳಿದ ಯಾವ ಸಮಯದ ಪರಿವೇ ನಮಗಿರಲಿಲ್ಲ. ಸಾಬ್‌ನ ಸೀಟಿಯ (Whistle) ಸದ್ದು ಮಾತ್ರ ನಮಗಿದ್ದ ಯಾಂತ್ರಿಕ ಗಡಿಯಾರವಾಗಿತ್ತು. ಅಂದು ಸಂಜೆ ತನಕ ಅದೇ ಸಭಾಂಗಣದಲ್ಲಿ ವಿಶ್ರಾಂತಿ ಪಡೆದು ಒಂದು ಬನ್ಸ್ ಮತ್ತು ಬಿಸಿ ಬಿಸಿ ಚಹಾ ಕುಡಿದೆವು. ನಂತರ ನಮ್ಮನ್ನು ಬೆಟಾಲಿಯನ್ ಪ್ರಕಾರ ಮೂರು ಸಾಲಿನಲ್ಲಾಗಿ ಉದ್ದಕ್ಕೆ ಕುಳಿತುಕೊಳ್ಳಿಸಿದರು. ನಾವು ಒಂದೇ ಕಾಲೇಜಿನವರು ಮೂರು ಸಾಲಿನಲ್ಲಾಗಿ ಸಮೀಪ ಸಮೀಪ ಕುಳಿತುಕೊಂಡೆವು. ಸ್ವಲ್ಪ ಹೊತ್ತಿನಲ್ಲೇ ತಿಳಿಯಿತು... ನಾವು 4 ಜನ ಬೇರೆ ಬೇರೆ ತಂಡಕ್ಕೆ ಹೋಗಲಿದ್ದೇವೆ ಎಂದು. ಕ್ಯಾಂಪ್‌ಗೆ ಬಂದಿದ್ದ 323 ಕೆಡೆಟ್‌ಗಳನ್ನು ಆಲ್ಫಾ, ಬ್ರಾವೋ, ಚಾರ್ಲಿ, ಡೆಲ್ಟಾ, ಇಕೋ ಎಂಬುದಾಗಿ 5 ತಂಡ ಮಾಡುತ್ತಾರೆ. ಅದರಲ್ಲಿ ಮೊದಲ ಮೂರು SDs ಹಾಗೂ ನಂತರದ ಎರಡು SWs. ಮುಂದಿನ ಹತ್ತು ದಿನ‌ ಈ ತಂಡದ ಆಧಾರಲ್ಲಿ ನಮ್ಮ ತರಬೇತಿ, ವಸತಿ ಸೌಕರ್ಯ ಎಲ್ಲಾ ಏರ್ಪಾಡಾಗುತ್ತಿತ್ತು. ನಾವು ನಮ್ಮ ಅನುಕೂಲಕ್ಕಾಗಿ ಕೂಡಲೇ ಎಲ್ಲರೂ ಒಂದೇ ತಂಡದಲ್ಲಿ ಬರುವಂತೆ ಕುಳಿತುಕೊಂಡೆವು. ಅಡ್ಡಾದಿಡ್ಡಿ ಲೆಕ್ಕಾಚಾರದ ನಂತರ ನಮ್ಮ ಕಾಲೇಜಿನ ನಾಲ್ವರು ಚಾರ್ಲಿ ಕಂಪೆನಿಯನ್ನು ಸೇರಿದೆವು. ಪ್ರತಿ ತಂಡಕ್ಕೂ ಒಬ್ಬ ಕೆಡೆಟ್‌ನನ್ನು ಸೀನಿಯರ್ ಎಂಬುದಾಗಿ ನೇಮಿಸಲಾಗಿತ್ತು. ನಮ್ಮ ಕಂಪನಿಗೆ 4 ನೇ ಕರ್ನಾಟಕ ಇಂಜಿನಿಯರಿಂಗ್ ಕಂಪನಿಯ ಜೊನಾಥನ್ ಆಳ್ವ ಎಂಬ ಕೆಡೆಟ್ ಸೀನಿಯರ್ ಆಗಿದ್ದನು. ಹಾಗೂ ಹೀಗೂ ಕತ್ತಲು ಆವರಿಸಿತು. ರಾತ್ರಿಯ ಊಟಕ್ಕೆ ಮುನ್ನ Roll Call Parade ಇತ್ತು.
ಇದು ಕ್ಯಾಂಪ್‌ನ ಪ್ರತಿದಿನ ಹಾಜರಿ ತೆಗೆಯುವ ಕ್ರಮ. ಪ್ರತಿ ಕಂಪನಿಯ ಸೀನಿಯರ್ ತಮ್ಮ ಕಂಪೆನಿಯಲ್ಲಿ ಇರುವ ಕೆಡೆಟ್‌ಗಳ ಸಂಖ್ಯೆ, ಅನಾರೋಗ್ಯ ಅಥವಾ ಇನ್ನಿತರ ಕಾರಣದಿಂದ ಗೈರುಹಾಜರಾದವರ ಸಂಖ್ಯೆಯ ಬಗ್ಗೆ ಹಿರಿಯ PI staff ಗೆ ಕ್ರಮಬದ್ಧವಾಗಿ ರಿಪೋರ್ಟ್ ಮಾಡಬೇಕು. ಹಿರಿಯ PI staff ಹಿರಿಯ JCO ಗೆ ರಿಪೋರ್ಟ್ ಮಾಡುತ್ತಾರೆ. ಹಿರಿಯ JCO ಅವರು ಕ್ಯಾಂಪ್ ಕಮಾಂಡಂಟ್ ಅವರಿಗೆ ರಿಪೋರ್ಟ್ ಮಾಡುತ್ತಾರೆ. ಈ ಎಲ್ಲಾ ಕ್ರಮವೂ ಮಿಲಿಟರಿ ಸಂಪ್ರದಾಯದಂತೆ ಕ್ರಮಬದ್ಧವಾಗಿ ನಡೆಯುತ್ತದೆ. ಅಂತಿಮವಾಗಿ ಕ್ಯಾಂಪ್ ಕಮಾಂಡಂಟ್ ಅವರು ಕೆಡೆಟ್‌ಗಳ ಕ್ಷೇಮವನ್ನು ವಿಚಾರಿಸುತ್ತಾರೆ. ಆಹಾರ ವ್ಯವಸ್ಥೆ, ವಸತಿ ವ್ಯವಸ್ಥೆಯ ಬಗ್ಗೆ ಪ್ರತಿದಿನ ವಿಚಾರಿಸುತ್ತಾರೆ. ನಮ್ಮ ಕ್ಯಾಂಪ್ ಉಡುಪಿ ಬೆಟಾಲಿಯನ್‌ನ ಹಿಡಿತದಲ್ಲಿ ಇದ್ದುದರಿಂದ ಉಡುಪಿ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಆರ್.ಕೆ ಸಿಂಗ್ ಅವರು ಕ್ಯಾಂಪ್ ಕಮಾಂಡಂಟ್ ಆಗಿದ್ದರು. ಸಾಮಾನ್ಯವಾಗಿ ಕ್ಯಾಂಪ್ ಕಮಾಂಡಂಟ್ ಸಾಬ್ ಮತ್ತು ಇತರೆ ಬೆಟಾಲಿಯನ್‌ಗಳ ಸಿ.ಓ ಸಾಬ್‌ಗಳು ಮಾತ್ರ ನಮ್ಮನ್ನು ಅಪರೂಪಕ್ಕೊಮ್ಮೆ ಆದರೂ ಇಂಗ್ಲೀಷ್‌ನಲ್ಲಿ ಮಾತನಾಡಿಸುತ್ತಿದ್ದರು. ಉಳಿದ ಎಲ್ಲಾ ಸಾಬ್‌ಗಳು ಹಿಂದಿ ಮಾತ್ರ ಬಳಸುತ್ತಿದ್ದರು. ಕ್ಯಾಂಪ್ ಕಮಾಂಡಂಟ್ ಮಾತನಾಡಿದ ಬಳಿಕ ಎನ್.ಸಿ.ಸಿ ಪ್ರಾರ್ಥನೆ, ರಾಷ್ಟ್ರಗೀತೆ, ರಾಷ್ಟ್ರ ಘೋಷದೊಂದಿಗೆ ದಿನದ ಕಾರ್ಯಕ್ರಮ ಕೊನೆಯಾಗುತ್ತಿತ್ತು. ಸಂಜೆಯ roll call parade ಪ್ರತಿದಿನದ ಅವಿಭಾಜ್ಯ ಅಂಶ. ನಂತರ ಊಟ; ಆ ದಿನ ರಾತ್ರಿ ಸಸ್ಯಾಹಾರಿ ಊಟ, ಪಾಯಸ.

ಕ್ಯಾಂಪ್‌ನಲ್ಲಿ ಪ್ರತಿದಿನ ಐದು ಹೊತ್ತು ಆಹಾರ. ಬೆಳಿಗ್ಗೆ 7.15 ರ ಸುಮಾರಿಗೆ ತಿಂಡಿ - ಚಹಾ (ಇಡ್ಲಿ-ಸಾಂಬಾರು, ಪೂರಿ-ಬಾಜಿ, ರವೆ-ಸಾರು, ಪಲಾವು-ಕಚ್ಚಂಬಾರ್,ಅವಲಕ್ಕಿ-ಚಟ್ನಿ, ಒಂದೊಂದು ದಿನ ಯಾವುದಾದರೂ ಒಂದು ಬಗೆ ತಿಂಡಿ ಇರುತ್ತಿತ್ತು.

ಪ್ರತಿದಿನ ಎಲ್ಲರಿಗೂ ಬೆಳಿಗ್ಗಿನ ಚಹಾಗೆ ಎರಡು ಬೇಯಿಸಿದ ಮೊಟ್ಟೆ ಹಾಗೂ ಒಂದು ಬಾಳೆಹಣ್ಣು), 11 ಗಂಟೆ ಸುಮಾರಿಗೆ ಲಘು ಉಪಾಹಾರ (ಚಹಾ ಅಥವಾ ಮಜ್ಜಿಗೆ, ಒಂದು ಸಣ್ಣ ಪ್ಯಾಕೆಟ್ ಬಿಸ್ಕತ್ತು ಅಥವಾ ಒಂದು ದೊಡ್ಡ ಬಾಳೆಹಣ್ಣು; ಪ್ರತಿದಿನ ಯಾವುದಾದರೂ ಒಂದೊಂದು ಬಗೆ), ಮಧ್ಯಾಹ್ನ 01.00 ಗಂಟೆಯ ಸುಮಾರಿಗೆ ಊಟ. (ಸಾಮಾನ್ಯವಾಗಿ ಮಧ್ಯಾಹ್ನ ಸಸ್ಯಾಹಾರಿ ಊಟ; ಮೂರು ದಿನ ಕೋಳಿ ಬಿರಿಯಾನಿ ಮತ್ತು ತರಕಾರಿ ಬಿರಿಯಾನಿ ಇತ್ತು, ಸಾಂಬಾರು, ಪಲ್ಯ/ಗಸಿ, ಉಪ್ಪಿನಕಾಯಿ, ಹಸಿ ತರಕಾರಿ ತುಂಡು, ಹಪ್ಪಳ, ಐಸ್‌ಕ್ರೀಂ), ಸಂಜೆ ಚಹಾ ಮತ್ತು ಸಣ್ಣ ಪ್ಯಾಕೆಟ್ ಬಿಸ್ಕತ್ತು ಅಥವಾ ಬನ್ಸ್.

ರಾತ್ರಿ ಸುಮಾರು 07.30 ಕ್ಕೆ ರಾತ್ರಿ ಭೋಜನ (ಸಾಮಾನ್ಯವಾಗಿ ಮಾಂಸಾಹಾರಿ ಮತ್ತು ಸಸ್ಯಹಾರಿ ಆಯ್ಕೆಯ ಊಟ; ಮಾಂಸಾಹಾರಿಗಳಿಗೆ ಕೋಳಿ ಪದಾರ್ಥ ಅಥವಾ ಮೊಟ್ಟೆ ಪದಾರ್ಥ ಮತ್ತು ಸಸ್ಯಹಾರಿಗಳಿಗೆ ಪನ್ನೀರ್ ಪದಾರ್ಥ ಜೊತೆಗೆ ಎಲ್ಲರಿಗೂ ಪಲ್ಯ, ಉಪ್ಪಿನಕಾಯಿ, ಪಾಯಸ). ಇವಿಷ್ಟು ಉಡುಪಿ ಬೆಟಾಲಿಯನ್ ನಮಗಾಗಿ ನೀಡಿದ ಆಹಾರದ ಪ್ರಕಾರ. ಆಹಾರದಲ್ಲಿ ದೂರುವಂತಹದ್ದು ಏನೂ ಇರಲಿಲ್ಲ. ರುಚಿಕರವಾಗಿತ್ತು, ಬೇಕಾದಷ್ಟು ಇತ್ತು. ಒಟ್ಟು ಹತ್ತು ದಿನ ಕೂಡ ಹೆಚ್ಚು ಕಡಿಮೆ ಆಹಾರದ ರೀತಿ ಒಂದೇ ರೀತಿ ಇತ್ತು. ಆದರೂ ಆಹಾರ ಸಾಕು ಎಂದು ಅನಿಸುತ್ತಿರಲಿಲ್ಲ.

ಹಾಗೆ ಕ್ಯಾಂಪ್‌ನ ಮೊದಲ ದಿನ... ಗಂಟೆ ಸುಮಾರು 08.00 ಕಳೆದಿರಬೇಕು. ಕ್ಯಾಂಪ್ ಗ್ರೌಂಡ್‌ನಿಂದ ನಮಗೆ ತಿಳಿಯಪಡಿಸಿದ ಹಾಸ್ಟೆಲ್‌ಗೆ ಹೋಗಲು ಅನುಮತಿ ಸಿಕ್ಕಿತು. ನಮ್ಮ ದೊಡ್ಡ ದೊಡ್ಡ ಬ್ಯಾಗ್‌ಗಳನ್ನು ಆರ್ಮಿಯ ಟ್ರಕ್‌ನೊಳಗೆ ರಾಶಿ ಹಾಕಿದೆವು, ಟ್ರಕ್ ಎಲ್ಲಿಗೋ ಹೋಯಿತು. ನಾವು ನಡೆಯಲು ಶುರು ಮಾಡಿದೆವು. ಆ ಕತ್ತಲೆಯಲ್ಲಿ ಎಲ್ಲಿಗೆ ನಡೆತುತ್ತಿದ್ದೇವೆ ಎನ್ನುವುದು ಅರ್ಥವಾಗಲಿಲ್ಲ‌. ನಿರ್ದಿಷ್ಟ ದೂರದಲ್ಲಿ ಇರುವ ಬೀದಿ ದೀಪಗಳು ಮಾತ್ರ ಸ್ವಲ್ಪ ಆದರೂ ಪ್ರಕಾಶ ನೀಡುತ್ತಿತ್ತು. ಕೈಯಲ್ಲಿ ಮೊಬೈಲ್ ಕೂಡ ಇರಲಿಲ್ಲ, ಟ್ರಕ್‌ನಲ್ಲಿದ್ದ ಬ್ಯಾಗ್‌ನಲ್ಲಿತ್ತು. ರಸ್ತೆ ಮಾತ್ರ ಅಚ್ಚುಕಟ್ಟಾಗಿ ಇತ್ತು. ಹಾಗಾಗಿ ನೆಲ ಕಾಣದಿದ್ದರೂ ಎಡವಿ ಬೀಳುವ ಸನ್ನಿವೇಶ ಯಾರಿಗೂ ಬರಲಿಲ್ಲ. ಒಂದು ಸಣ್ಣ ಏರುರಸ್ತೆಯಲ್ಲಿ ಮುಂದಕ್ಕೆ ಹೋಗಿ, ಇಳಿಜಾರಾದ ರಸ್ತೆಯಲ್ಲಿ ಸಾಗಿದೆವು. ಟ್ರಕ್‌ ಹೋದ ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ದೂರ ನಾವು ಕಂಪನಿಯ ಜೊತೆಗೆ ನಡೆದೆವು‌. ಆ ಕತ್ತಲೆಯಲ್ಲಿ ನಮ್ಮನ್ನು ಮುನ್ನಡೆಸಿದ್ದು ಯಾರು ಎಂದು ಗೊತ್ತಿಲ್ಲ. ಆದರೂ "ಶೇಷಾದ್ರಿ" ಎಂಬ ಹೆಸರಿನ 6-7 ಮಹಡಿಗಳ ಹಾಸ್ಟೆಲ್ ಕಟ್ಟಡದ ಮುಂದೆ ತಲುಪಿದೆವು. ಟ್ರಕ್ ನಮ್ಮ ಆಗಮನಕ್ಕೆ ಕಾಯುತ್ತಾ ಇತ್ತು. 2-3 ಜನ ಕೆಡೆಟ್‌ಗಳು ಟ್ರಕ್ ಒಳಗೆ ಹತ್ತಿದರು. ಅದರಿಂದ ಎಲ್ಲಾ ಬ್ಯಾಗ್‌ಗಳನ್ನು ಹೊರಗೆ ಇಳಿಸಿದರು. ಅರ್ಧಗಂಟೆ ಕಾಲ ಬ್ಯಾಗ್ ಇಳಿಸುವುದರಲ್ಲಿ ಮತ್ತು ಹುಡುಕುವುದರಲ್ಲಿ ಕಳೆದೆವು. ನನ್ನ ಕಾಲೇಜಿನ 4 ಜನರ ಬ್ಯಾಗ್ ಕೈಗೆ ಸಿಕ್ಕಿದ್ದೇ ತಡ, ಹಾಸ್ಟೆಲ್‌ ಕಟ್ಟಡದ ಒಳಕ್ಕೆ ಓಡಿದೆವು. 5 ನೇ ಮಹಡಿಯಲ್ಲಿ ನಮ್ಮ ಚಾರ್ಲಿ ಕಂಪೆನಿಯವರಿಗೆ ವಸತಿ ಏರ್ಪಡಿಸಲಾಗಿತ್ತು. ಪ್ರತಿ ಕೋಣೆಯಲ್ಲಿ ನಾಲ್ಕು ಜನರಿಗೆ ಅವಕಾಶ. ನಾವು ನಮ್ಮ ಕಾಲೇಜಿನ 4 ಜನ ಒಂದೇ ಕಂಪೆನಿಯಲ್ಲಿದ್ದೆವು. ಹಾಗಾಗಿ ನಾವು 5 ನೇ ಮಹಡಿಯ 508 ನೇ ಸಂಖ್ಯೆಯ ಕೋಣೆಯಲ್ಲಿ ಸೇರಿದೆವು‌. ಆ ಕೋಣೆಯಲ್ಲಿ 4 ಮಂಚ, ಹಾಸಿಗೆ, ಒಂದು ಫ್ಯಾನ್, 6 ಕಪಾಟು, 3 ಟೇಬಲ್, ಒಂದು ಟ್ಯೂಬ್ ಲೈಟ್, ಒಂದು ಚಾರ್ಜಿಂಗ್ ಪ್ಲಗ್ ಇತ್ತು. ನಾವು ನಮ್ಮ ಬ್ಯಾಗ್‌ಗಳನ್ನು ಟೇಬಲ್ ಮೇಲೆ ಇಳಿಸಿದೆವು. ಕೂಡಲೇ ಒಬ್ಬೊಬ್ಬರಾಗಿ ಸ್ನಾನ ಮಾಡಿ ಬಂದೆವು‌. ಪ್ರತಿ ಮಹಡಿಯಲ್ಲಿ ಬೇಕಾದಷ್ಟು ಸ್ನಾನದಕೋಣೆ, ಶೌಚಾಲಯ, ಬಟ್ಟೆ ಒಗೆಯುವ ಸ್ಥಳ ಇತ್ತು. ಮೊದಲ ದಿನ ಬಟ್ಟೆ ಒಗೆಯಲು ಏನೂ ಇರಲಿಲ್ಲ. ಹಾಗಾಗಿ ಎಲ್ಲರೂ ಬೇಗ ಸ್ನಾನ ಮುಗಿಸಿದೆವು, ನಂತರ ಬ್ಯಾಗ್‌ನೊಳಗೆ ಇದ್ದ ಯೂನಿಫಾರ್ಮ್ ಹೊರತೆಗೆದು ಇಸ್ತ್ರಿ ಹಾಕಿ ಪುನಃ ಬ್ಯಾಗ್‌ಗೆ ತುಂಬಿಸಿದೆವು. ನಾಳೆ ಬೆಳಿಗ್ಗೆ 05.45 ಟ್ರಾಕ್ ಬಟ್ಟೆ ಧರಿಸಿಕೊಂಡು ಹಾಸ್ಟೆಲ್ ಎದುರು ತಯಾರಿರಬೇಕು ಎಂಬ ಆಜ್ಞೆ ರಾತ್ರಿ ಬಂದಿತ್ತು. ಹಾಗಾಗಿ ಯೂನಿಫಾರ್ಮ್, DMS, ಊಟಕ್ಕೆ ತಟ್ಟೆ ಮತ್ತು ಗ್ಲಾಸ್, ನೀರಿನ ಕುಪ್ಪಿ ಸಣ್ಣ ಬ್ಯಾಗ್‌ನಲ್ಲಿ ಹಾಕಿ ಸಿದ್ದ ಮಾಡಿಟ್ಟುಕೊಂಡೆವು. ರಾತ್ರಿ ಮನೆಗೆ ಫೋನ್ ಮಾಡಿದ ನಂತರ ನಿದ್ದೆ ಮಾಡಲು ತೀರ್ಮಾನಿಸಿದೆವು. ಅಷ್ಟರಲ್ಲಿ ಅನಿವಾರ್ಯವಾಗಿ ಕೆಲವು ಕೆಲಸಗಳು ಬಾಕಿ ಇರುವುದಾಗಿ ತಿಳಿಯಿತು. ಬ್ಯಾಗ್‌ನಲ್ಲಿದ್ದ ಬಟ್ಟೆ ನೇತು ಹಾಕಲು ಸ್ಥಳವಿರಲಿಲ್ಲ. ಹಾಗಾಗ ನಾವು ತಂದಿದ್ದ ಬಳ್ಳಿಗಳಿಂದ ನೇಕೆಯನ್ನು ಕಟ್ಟಿಕೊಂಡೆವು. ಕೋಣೆಯ ಬಾಗಿಲಿನ ಮೇಲೆ ಅಗಲವಾದ ತೂತು ಇತ್ತು. ಅದನ್ನು ಕೂಡ ಪೇಪರ್ ಎಲ್ಲಾ ಸೇರಿಸಿ ಮುಚ್ಚಿಕೊಂಡೆವು (ಸೊಳ್ಳೆ ಕಾಲದಿಂದ ತಪ್ಪಿಸಿಕೊಳ್ಳಲು). ಸೊಳ್ಳೆಗಳು ಅಲ್ಲಿ ಬೇಕಾದಷ್ಟು ಇತ್ತು. ಆದರೆ ಹತ್ತು ದಿನವೂ ನಮ್ಮ ನಿದ್ದೆಗೆ ಸೊಳ್ಳೆಗಳು ಯಾವ ಅಡ್ಡಿಯನ್ನು ಮಾಡಲಿಲ್ಲ. ಅಂದು ರಾತ್ರಿ ಸುಮಾರು 12 ಗಂಟೆ ಆದಾಗ ಮಲಗಿದೆವು. 

27 ಅಕ್ಟೋಬರ್, ಕ್ಯಾಂಪ್‌ನ ಎರಡನೇ ದಿನ…


ಬೆಳಿಗ್ಗೆ 04.25 ಕ್ಕೆ ನಮ್ಮ ರೂಂನಲ್ಲಿ ಮೊಬೈಲ್ ಅಲರಾಂ ರಿಂಗಣಿಸಿತು. ಗೆಳೆಯ ಆದೇಶ ಮೊದಲು ಎದ್ದನು. ಪ್ರತಿದಿನ ನಮ್ಮ ನಾಲ್ವರಲ್ಲಿ ಮೊದಲು ನಿದ್ರಿಸುವುದು ಅವನೇ, ಮೊದಲು ಏಳುವುದು ಕೂಡ ಅವನೇ… ನಂತರದ ಸರದಿ ನನ್ನದು. ಎದ್ದ ಕೂಡಲೇ ಹುಲ್ಲು ಉಜ್ಜುವುದು, ಶೇವಿಂಗ್‌ನಿಂದ ಆರಂಭಗೊಂಡು ಪ್ರಾತಃ ಕಾರ್ಯಗಳನ್ನು ಮುಗಿಸಿ 5.15 - 05.30 ರ ಒಳಗೆ PT Parade ಗೆ ಹೋಗಲು PT dress ಮತ್ತು ಶೂ ಧರಿಸಿ ಸಿದ್ದರಾಗುತ್ತಿದ್ದೆವು.

ನಂತರ ನಮ್ಮ ನೀರಿನ ಕುಪ್ಪಿಯಲ್ಲಿ ಬಿಸಿ ನೀರು ತುಂಬಿಸಿಡುವುದು ಪ್ರಮುಖ ಕೆಲಸ. ಅದು ತಪ್ಪಿದರೆ ದಿನವಿಡೀ ತಣ್ಣೀರು ಸೇವನೆ ಮಾಡಬೇಕಾದಿತು. ಅಲ್ಲಿ ಲಭಿಸುತ್ತಿದ್ದ ತಣ್ಣೀರು ಹಲವರ ದೇಹಕ್ಕೆ ಹಿಡಿಸುತ್ತಿರಲಿಲ್ಲ. ಹಾಗಾಗಿ ತಣ್ಣೀರು ಕುಡಿಯಬೇಡಿ ಎಂದು ನಮ್ಮ ಹಿಂದಿನ ಬ್ಯಾಚಿನವರು ಸೂಚನೆ ಕೊಟ್ಟಿದ್ದರು. ಹಾಸ್ಟೆಲ್‌ನ ನೆಲಮಹಡಿಯಲ್ಲಿ ಮಾತ್ರ ಬಿಸಿನೀರು ಸಿಗುತ್ತದೆ. ಕೆಲವೊಮ್ಮೆ ಆ ನೀರು ಎಷ್ಟು ಬಿಸಿ ಇರುತ್ತದೆ ಎಂದರೆ… ಕೈ ಸುಡುವಷ್ಟು… ಅಲ್ಲ… ಗಟ್ಟಿಯಾದ ಪ್ಲಾಸ್ಟಿಕ್ ಕುಪ್ಪಿ ಕೂಡ ಕರಗುವಷ್ಟು ಬಿಸಿ… ಆ ಬಿಸಿನೀರಿನ ಟ್ಯಾಪ್‌ನಿಂದ ಜಾಗರೂಕತೆಯಿಂದ ನಮ್ಮ ನೀರಿನ ಕುಪ್ಪಿ ತುಂಬಿಸುವುದು ಒಂದು ಸಾಹಸವೇ ಆಗಿತ್ತು. ಸಾಧ್ಯವಾದಷ್ಟು ತಣ್ಣೀರು ಕಲಬೆರಕೆ ಮಾಡದೆ ನೀರು ತುಂಬಿಸಲು ಪ್ರಯತ್ನ ಮಾಡುತ್ತಿದ್ದೆವು. 


ಪ್ರತಿದಿನ 05.30 ರಿಂದ 05.55 ರ ಒಳಗೆ ಯಾವುದಾದರೂ ನಿರ್ದಿಷ್ಟ ಸಮಯಕ್ಕೆ ಹಾಸ್ಟೆಲ್ ಎದುರುಗಡೆ ಹಾಜರಿರಲು ಆಜ್ಞೆ ಸಿಗುತ್ತಿತ್ತು. ಕ್ಯಾಂಪ್‌ನ ಎರಡನೇ ದಿನ, 05.45 ಕ್ಕೆ ಎಲ್ಲರೂ ಹಾಜರಿದ್ದರು. 06.00 ಗಂಟೆಗೆ ಸರಿಯಾಗಿ Ground ನಲ್ಲಿ PT Parede ಶುರು ಆಯ್ತು. ಪ್ರತಿ ಕಂಪೆನಿಗೂ ಒಬ್ಬೊಬ್ಬರು PI Staff PT ಮಾಡಿಸುತ್ತಿದ್ದರು. ಬೆಳಿಗ್ಗೆ ಸುಮಾರು ಒಂದು ಗಂಟೆ PT ಮಾಡಿ ಆದಾಗ ಬೆವರು ಇಳಿದು ಬಟ್ಟೆ ಇಡೀ ಒದ್ದೆ ಆಗುತ್ತಿತ್ತು. ನಂತರ ಮೂರು ಸಾಲುಗಳಾಗಿ ಓಪನ್ ಆಡಿಟೋರಿಯಂ‌ನ ಕಡೆಗೆ ಪಯಣ… ಅಲ್ಲಿ ಬೆಳಿಗ್ಗಿನ ಉಪಾಹಾರ. ಉಪಾಹಾರ ಮುಗಿಸಿದ ಕೂಡಲೇ ಬ್ಯಾಗ್‌ನಲ್ಲಿದ್ದ ಎನ್.ಸಿ.ಸಿ ಯೂನಿಫಾರ್ಮ್ ಹಾಕಿಕೊಳ್ಳುತ್ತಿದ್ದೆವು. 


ಪ್ರತಿದಿನವೂ ಪ್ರತಿ ಕಂಪನಿಯ ಕೆಡೆಟ್‌ಗಳಿಗೆ volunteer duty ಸಿಗ್ತಾ ಇತ್ತು. ಅಡುಗೆ ಕೋಣೆಯಲ್ಲಿ ತಯಾರಿಸಿಟ್ಟ ಆಹಾರವನ್ನು ವಿತರಣೆಗೆ ತಂದು ಇಡುವುದು, ಆಹಾರ ಬಡಿಸುವುದು, ಪಾತ್ರೆಗಳನ್ನು ಅಡುಗೆ ಕೋಣೆಗೆ ಹಾಗೆಯೇ ಹಿಂತಿರುಗಿಸುವುದು, ಅಡುಗೆ ಕೋಣೆಯ ಪರಿಸರ ಶುಚಿಗೊಳಿಸುವುದು, ಕ್ಯಾಂಪ್ ಸ್ಟೋರ್‌ನಿಂದ Black Board, Podium ಗಳನ್ನು ಗ್ರೌಂಡ್‌ಗೆ ಅಥವಾ ತರಗತಿಗಳಿಗೆ ಕೊಂಡೊಂಯ್ಯುವುದು, ವಾಪಸು ಹಿಂತಿರುಗಿಸುವುದು, ಮಿಲಿಟರಿ ಟೆಂಟುಗಳನ್ನು ಮಡಚಿ ಇಡುವುದು, ಅಪರೂಪಕ್ಕೆ ಒಮ್ಮೊಮ್ಮೆ ಆರ್ಮಿ ಟ್ರಕ್‌ಗಳಿಗೆ ಯಾವುದೇ ವಸ್ತುಗಳನ್ನು ಏರಿಸುವುದು ಇತ್ಯಾದಿ ಸಣ್ಣ ಪುಟ್ಟ ಕೆಲಸಗಳು ಸರಾಗವಾಗಿ ಸಿಗುತ್ತಿತ್ತು. ಅದನ್ನು ಮಾಡುವುದು ಕಡ್ಡಾಯವೇನಲ್ಲ, ಸ್ವಯಂಸೇವಕತ್ವದ ಕೆಲಸಗಳು. ಆ ಕೆಲಸಗಳು ಶಿಸ್ತು ಬದ್ಧ ಎನ್.ಸಿ.ಸಿ ಕ್ಯಾಂಪ್‌ನಲ್ಲಿ ನೀಡುತ್ತಿದ್ದ ಖುಷಿಯೇ ಬೇರೆ. ಆರ್ಮಿ ಸಾಬ್‌ಗಳ ಕತೆಗಳನ್ನು ಕೇಳುತ್ತಾ, ಸಣ್ಣಪುಟ್ಟ ಚರ್ಚೆ ಮಾಡುವ ಅನುಭವ ಬೇರೆಲ್ಲೂ ಸಿಗದು. ಇಂತಹ ಸಣ್ಣಪುಟ್ಟ ಕೆಲಸ ಮಾಡಿಸುವಾಗ ಸಾಬ್‌ಗಳು ಕೆಡೆಟ್‌ಗಳಿಗೆ ಬೇಜಾರು ಅಥವಾ ಕಷ್ಟ ಆಗದಂತೆ ಪ್ರತ್ಯೇಕ ಗಮನ ಹರಿಸುತ್ತಿದ್ದುದನ್ನು ನಾನು ಗಮನಿಸಿದ್ದೆ. 

ಕ್ಯಾಂಪ್‌ನ ಎರಡನೇ ದಿನದಲ್ಲಿ ನಡೆದ ಪ್ರಮುಖ ಚಟುವಟಿಕೆಗಳು :

  • Lecture on First Aid, Health & Hygiene by Dr. Praveen, KMC Mangalore

  • Lecture on Opportunities in Indian Army by Army Recruitment Officer Col. Anuj Gupta, ARO Mangalore

  • Lecture on Weapon Training by Hav. Mahendra Karki

ಕ್ಯಾಂಪ್‌ನ ಮೂರನೇ ದಿನದಲ್ಲಿ ನಡೆದ ಪ್ರಮುಖ ಚಟುವಟಿಕೆಗಳು :

  • Drill Practice

  • Weapon : Range Procedure & Safety Precautions, Lying Position

  • Holding of weapon, Aiming, Trigger Operation

  • Infantry weapon & equipment

  • InSAS 5.56 mm

  • Introduction to Types of Map, Conventional signs, Scale, Grid, Topographical forms, Technical Data

  • Field Craft & Battle Craft

  • Games



ಕ್ಯಾಂಪ್‌ನ ನಾಲ್ಕನೇ ದಿನದಲ್ಲಿ ನಡೆದ ಪ್ರಮುಖ ಚಟುವಟಿಕೆಗಳು :

  • 0.22 Firing - Sub. Maj. M.S.Rawat

ಎನ್.ಸಿ.ಸಿ ಕೆಡೆಟ್‌ಗಳಿಗೆ ಮಾತ್ರ ಲಭಿಸುವ ಅವಕಾಶಗಳಲ್ಲಿ ಇದೂ ಒಂದು. ಭಾರತೀಯ ಸೈನ್ಯದ ಕೋವಿಯಲ್ಲಿ ಗುಂಡು ಹಾರಿಸುವ ಅವಕಾಶ.

ಕ್ಯಾಂಪ್‌ನ ನಾಲ್ಕನೇ ದಿನ ಬೆಳಿಗ್ಗೆ ನಮ್ಮ ಕಂಪನಿಗೆ Firing period ಇತ್ತು. ಬೆಳಿಗ್ಗೆ 06.00 ಗಂಟೆಗೆ Firing Ground ನಲ್ಲಿ ರಿಪೋರ್ಟ್ ಮಾಡಲು ಹಿಂದಿನ ದಿನವೇ ಸೂಚನೆ ಸಿಕ್ಕಿತ್ತು. ನಮ್ಮ ಚಾರ್ಲಿ ಕಂಪನಿಯು ಸಮಯಕ್ಕೆ ಸರಿಯಾಗಿ ಹಾಜರಾದೆವು. ಒಂದು ಬಾರಿಗೆ ಎಂಟು ಕೆಡೆಟ್‌ಗಳಿಗೆ ಫಯರಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು. 0.22 ರೈಫಲ್‌ನಲ್ಲಿ 20 ಮೀಟರ್ ದೂರದ ಗುರಿಗೆ ಫಯರಿಂಗ್ ಮಾಡಲು ಐದು ಅಮ್ಯುನೇಷನ್ (ಬುಲೆಟ್) ಕೊಟ್ಟಿದ್ದರು.

ಬುಲೆಟ್ ವಿತರಣೆ ಮಾಡುವ ಸಾಬ್‌ನ ಬಳಿಗೆ ಎಂಟು ಕೆಡೆಟ್‌ಗಳು ಕ್ರಮಬದ್ಧವಾಗಿ ಹೋಗಬೇಕಿತ್ತು. ಆ ಕ್ರಮ ತಪ್ಪಿಸಿದರೆ ವಾಪಾಸು ಹೋಗಬೇಕಿತ್ತು. ನಮ್ಮ ಕಂಪೆನಿಯವರು ಆರಾಮವಾಗಿ, ಕ್ರಮಬದ್ಧವಾಗಿ ಅಮ್ಯುನೇಷನ್ ತೆಗೆದುಕೊಂಡೆವು. ನಂತರ ರೈಫಲ್ ಸಮೀದ ಗ್ರೌಂಡ್‌ಶೀಟ್‌ನ ಮೇಲೆ ನೆಲಮುಖವಾಗಿ ಮಲಗಿದೆವು. ಸುರಕ್ಷತೆಗೆ ಹೆಲ್ಮೆಟ್ ಧರಿಸಿದೆವು. ರೈಫಲ್ ಕೈಗೆ ಎತ್ತಿಕೊಂಡು, ಸಾಬ್ ಹೇಳಿದ ಹಾಗೆ ಮೊದಲ ಬುಲೆಟ್ ಲೋಡ್ ಮಾಡಿದೆವು. ಶ್ವಾಸವನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ಗುರಿಯನ್ನು ನೋಡಿ ಟ್ರಿಗರ್ ಆಪರೇಷನ್ ಮಾಡಿದೆವು. ಅದೇ ರೀತಿ ಒಂದೊಂದಾಗಿ ಐದು ಬುಲೆಟ್ ಫಯರ್ ಮಾಡಿದೆವು.

ನಂತರ ಎಂಟು ಮಂದಿ, ಗುರಿಯ ಕಡೆಗೆ ಕ್ರಮಬದ್ಧವಾಗಿ ಮಾರ್ಚ್ ಮಾಡಿದೆವು. ಅವರವರ ಗುರಿಯ ಎದುರು ನಿಂತೆವು. ಸಾಬ್‌ ಬಂದು ನಮ್ಮ ಗುರಿಯಲ್ಲಿ ಬುಲೆಟ್‌ನ ಸ್ಥಾನ ಗುರುತು ಮಾಡಿ ನಮ್ಮ ಅಂಕಗಳನ್ನು ಬರೆದುಕೊಂಡರು. ನನಗೆ ಗ್ರೂಪಿಂಗ್ ಫಯರಿಂಗ್‌ನಲ್ಲಿ 08 cm (ಅಂದರೆ, ಒಟ್ಟು 5 ಬುಲೆಟ್‌ನಲ್ಲಿ ಅತಿ ದೂರದಲ್ಲಿ ಇರುವ ಎರಡು ಬುಲೆಟ್‌ನ ನಡುವಿನ ಅಂತರ) ಬಂದಿತ್ತು. ಗ್ರೂಪಿಂಗ್ ಫಯರಿಂಗ್‌ನಲ್ಲಿ ಅತಿಕಡಿಮೆ ಅಂತರ ಬಂದರೆ ಜಾಸ್ತಿ ಅಂಕ ಬರುತ್ತದೆ.

ಆ ದಿನ ಇತರ ಕಂಪನಿಯವರಿಗೆ ಫಯರಿಂಗ್ ಗ್ರೌಂಡ್‌ನಲ್ಲಿ ಪನಿಶ್‌ಮೆಂಟ್‌ಗಳು ಸಿಕ್ಕಿದೆ ಎಂಬ ಸುದ್ದಿ ಸಿಕ್ಕಿತು. ನಮಗೆ ಪನಿಶ್‌ಮೆಂಟ್ ಸಿಗಲಿಲ್ಲ ಎಂಬ ಖುಷಿಯಲ್ಲಿ ನಾವು ಬೆಳಿಗ್ಗಿನ ಉಪಾಹಾರಕ್ಕೆ ಹೋದೆವು. ಆದರೆ ನಮ್ಮ ಬ್ಯಾಚ್‌ನಲ್ಲಿ ಕೆಲವರ ಬುಲೆಟ್ ಗುರಿಯ ಶೀಟ್‌ನಲ್ಲಿ ಎಲ್ಲಿಯೂ ಇರಲಿಲ್ಲ (ಅಂದರೆ ವಾಷ್‌ಔಟ್ ಆಗಿತ್ತು.) ಅವರಿಗೆ ಪನಿಶ್‌ಮೆಂಟ್ ಸಿಕ್ಕಿತ್ತು. ಅದರ ಬಳಿಕ ಅವರಿಗೆ ಪುನಃ ಐದು ರೌಂಡ್ ಫಯರಿಂಗ್ ಅವಕಾಶ ಸಿಕ್ಕಿತು. ಹಾಗೂ ಹೀಗೂ ಸರಿ ಫಯರಿಂಗ್ ಮಾಡಿದವರಿಗೆ ಎರಡನೇ ಬಾರಿ ಫಯರಿಂಗ್ ಭಾಗ್ಯ. ನನಗೆ ಅದು ಸಿಗಲಿಲ್ಲ. ಆದರೂ ಪನಿಶ್‌ಮೆಂಟ್ ತಪ್ಪಿದ ಖುಷಿ.

  • Drill

  • FC & BC

  • Armed services & organisation, inf battalion

  • Description of ground

  • Games



ಕ್ಯಾಂಪ್‌ನ ಐದನೇ ದಿನದಲ್ಲಿ ನಡೆದ ಪ್ರಮುಖ ಚಟುವಟಿಕೆಗಳು :

  • Rifle Drill

ರೈಫಲ್ ಡ್ರಿಲ್ ಮಾಡಿಸುವಾಗ ವಿನೋದ್ ರೈ ಸಾಬ್ Demonstration ಗೆ ಕೆಡೆಟ್‌ಗಳನ್ನು ಕರೆಯುತ್ತಿದ್ದರು. ನಾನು ಮತ್ತು ಇನ್ನೊಬ್ಬ ಗೆಳೆಯ ಕೂಡಲೇ Demonstration ಗೆ ಹೋಗುತ್ತಿದ್ದೆವು. ಇದರಿಂದಾಗಿ ನಮಗೆ ಉಳಿದ ಕೆಡೆಟ್‌ಗಳಿಗೆ ಹೋಲಿಸಿದರೆ Rifle Drill ಮಾಡಲು ಹೆಚ್ಚು ಅವಕಾಶ ಸಿಗುತ್ತಿತ್ತು. ಅವಕಾಶಗಳು ಬಂದಾಗ ಕೈಹಿಡಿಯಬೇಕು, ಕೈತಪ್ಪಿದರೆ ಮರಳಿ ಸಿಗದು ಮತ್ತೆ...

  • Relief contours & gradients, cardinal point, types of north, bearing, service protractor

  • War fought by India

  • Battle craft & fire cover precautions

  • Prismatic compass, map setting & finding own position

  • Lecture on Military awards by Lt. Rajesh Shettigar

ಕ್ಯಾಂಪ್‌ನ ಆರನೇ ದಿನದಲ್ಲಿ ನಡೆದ ಪ್ರಮುಖ ಚಟುವಟಿಕೆಗಳು :

  • Application Firing

ಈ ದಿನ ನಮ್ಮ ಕಂಪನಿಗೆ ಎರಡನೇ ಸಲ ಫಯರಿಂಗ್ ಅವಕಾಶ ಸಿಕ್ಕಿತು. ಬೆಳಿಗ್ಗೆ 06.00 ಕ್ಕೆ ನಾವು ಫಯರಿಂಗ್ ಗ್ರೌಂಡ್‌ಗೆ ಹೋದೆವು. ಇಂದು ಕೂಡ ಐದು ರೌಂಡ್ ಫಯರಿಂಗ್ ಇತ್ತು. ಇಂದು Application Firing, ಅಂದರೆ ಗುರಿಯ ಸರಿ ಮಧ್ಯಕ್ಕೆ ಬುಲೆಟ್ ತಾಗಬೇಕಿತ್ತು.

ಇದೀಗ ನಾವು ಎರಡನೇ ಸಲ ಫಯರಿಂಗ್ ಮಾಡಲು ಹೋಗಿದ್ದೆವು. ಈ ಬಾರಿ ನಮಗೆ ಸುಲಭವಾಗಿ ಅಮ್ಯುನೇಷನ್ ಕೊಡಲಿಲ್ಲ. ನಾವು ಸಾಲಾಗಿ ಬಂದ ಕ್ರಮ ಸರಿಯಿಲ್ಲ ಅಂತ 3-4 ಸಲ ವಾಪಾಸು ಬರಲು ಹೇಳಿ ನಮ್ಮನ್ನು ಆಟ ಆಡಿಸಿದರು. ನಂತರ ಸುಮಾರು ಹತ್ತು ನಿಮಿಷಗಳ ಕಾಲ ನಮಗೆ ಬೆಂಡ್ ಪನಿಶ್‌ಮೆಂಟ್ ಕೊಟ್ಟರು. ಆ ಬೆಳಿಗ್ಗಿನ ಚಳಿಯಲ್ಲಿ, ಅಷ್ಟು ಹೊತ್ತು ಮೈದಾನದಲ್ಲಿ ಚೆದರಿದ್ದ ಕಲ್ಲುಗಳ ಮೇಲೆ ಕೈಯನ್ನು ಊರಿ ಹಸ್ತ ಕೆಂಪು ಕೆಂಪಾಗಿತ್ತು. ಫಯರಿಂಗ್ ಮಾಡುವಾಗ ರೈಫಲ್ ಹಿಡಿಯಲು ಕೈ ಹದವಾಗಲು ಈ ರೀತಿಯ ಪನಿಶ್‌ಮೆಂಟ್ ಅಗತ್ಯ ಎಂಬ ನೀತಿಪಾಠ ಹೇಳಿ ಅಲ್ಲಿದ್ದ ಸಾಬ್ ನಮಗೆ ಬುಲೆಟ್ ಕೊಟ್ಟರು. ಕೈನೋವಾಗಿದ್ದರೂ, ಆ ಆರ್ಮಿ ಶಿಕ್ಷೆಯೂ ಒಂದು ಖುಷಿ.

ಸೀದ ಫಯರಿಂಗ್ ಮಾಡಲು ಹೋದೆವು. ಆ ದಿನ ಫಯರಿಂಗ್ ಮಾಡಲು ಸರಿ ಗುರಿಯೇ ಸಿಗಲಿಲ್ಲ. ನನಗೆ 50 ರಲ್ಲಿ 18 ಅಂಕ ಸಿಕ್ಕಿತು. 10 ಅಂಕಕ್ಕಿಂತ ಕಡಿಮೆ ಬಂದವರಿಗೆ ವಾಪಾಸು ಬೆಂಡ್ ಪನಿಶ್‌ಮೆಂಟ್. ನಮ್ಮ ಕಾಲೇಜಿನ ಮಿಥುನ್ 39/50 ಸ್ಕೋರ್‌ನ ದಾಖಲೆ ಮಾಡಿದನು.

ಅವನು ನಮ್ಮ ಚಾರ್ಲಿ ಕಂಪನಿಯನ್ನು ಪ್ರತಿನಿಧಿಸುವ ಫಯರಿಂಗ್ ಸ್ಪರ್ಧೆಗೆ ಆಯ್ಕೆ ಆದನು. ಅಮ್ಯುನೇಷನ್ ಪಾಯಿಂಟ್‌ನಲ್ಲಿ ಇದ್ದ ಸಾಬ್‌ನ ಹೆಸರು ಅನುಜ್ ರಾಯ್ ಅಂತ. ಅವರು 17 ನೇ ವರ್ಷಕ್ಕೆ ಸೈನ್ಯ ಸೇರಿದವರು ಅಂತ ಮತ್ತೆ ತಿಳಿಯಿತು.

  • Rifle Drill - Shastr

  • Radio Communication Procedure

  • Map to ground & Ground to map

  • Lecture on entrepreneurship by Mrs. Anasooya, Russet Ujire

  • Games


ಕ್ಯಾಂಪ್‌ನ ಏಳನೇ ದಿನದಲ್ಲಿ ನಡೆದ ಪ್ರಮುಖ ಚಟುವಟಿಕೆಗಳು :

  • P.T

  • Rifle Drill

  • Camouflage & Concealment

  • Communication Procedure

  • Indian Constitution (by Lt. Rajesh Shettigar)

  • Practical Demonstration on disaster management by NDRF Team from 10th Battalion NDRF.

ಕ್ಯಾಂಪ್‌ನ ಎಂಟನೇ ದಿನದಲ್ಲಿ ನಡೆದ ಪ್ರಮುಖ ಚಟುವಟಿಕೆಗಳು :

  • Rifle Drill

  • Motivation Speech by Ex-RDC-NCC cadet Mr. Hemakumar B, Asst. Commissioner, 7th Karnataka State Reserve Police, Mangalore.

  • Lecture on Social awareness & Rural Development

  • ಈ ದಿನ ಮಂಗಳೂರು ಎನ್.ಸಿ.ಸಿ ಗ್ರೂಪ್ ಇದರ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ ಶರ್ಮಾ ಅವರು Pre-RDC (ii) ಸೆಲೆಕ್ಷನ್‌‌ನ ಭಾಗವಾಗಿ ನಮ್ಮ ಕ್ಯಾಂಪ್‌ಗೆ ಭೇಟಿ ನೀಡಿದ್ದರು. ನಮ್ಮ ಕಾಲೇಜಿನ ನಾಲ್ವರು Pre-RDC (III) ಗೆ ಆಯ್ಕೆ ಆದರು. ಮಧ್ಯಾಹ್ನದ ನಂತರ ಗ್ರೂಪ್ ಕಮಾಂಡರ್ ಸಾಬ್ ನಮ್ಮನ್ನು ಉದ್ದೇಶಿಸಿ ಮಾತನಾಡಿದರು.

ಕ್ಯಾಂಪ್‌ನ ಒಂಭತ್ತನೆಯ ದಿನದಲ್ಲಿ ನಡೆದ ಪ್ರಮುಖ ಚಟುವಟಿಕೆಗಳು :

  • Rifle Drill

  • Blood Donation

ಈ ದಿನ ಕ್ಯಾಂಪ್‌ನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಕ್ಯಾಂಪ್‌ನ ಆರಂಭದ ದಿನವೇ ಈ ಕುರಿತು ನಮಗೆ ಮಾಹಿತಿ ನೀಡಿದ್ದರು.‌ ಅಂದು ಸುಮಾರು ಕೆಡೆಟ್‌ಗಳು ರಕ್ತದಾನಕ್ಕೆ ಆಸಕ್ತರಾಗಿದ್ದರು. ಆದರೆ ಕ್ಯಾಂಪ್‌ನಲ್ಲಿ ತಣ್ಣೀರಿನ ಸೇವನೆಯಿಂದ ಶೀತ ಜ್ವರ ಕಾಣಿಸಿಕೊಂಡ ಕೆಡೆಟ್‌ಗಳಿಗೆ ರಕ್ತದಾನಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ 300 ರಷ್ಟು ಕೆಡೆಟ್‌ಗಳಿದ್ದ ಕ್ಯಾಂಪ್‌ನಲ್ಲಿ ರಕ್ತದಾನ ಮಾಡಿದವರು ಕೇವಲ 44 ಮಂದಿ ಮಾತ್ರ. ಅವರಲ್ಲಿ ನಾನೂ ಒಬ್ಬ ಎನ್ನುವುದು ನನಗೆ ಹೆಮ್ಮೆ.‌

ಅದು ನನ್ನ ಜೀವನದ ಮೊದಲ ರಕ್ತದಾನ. 7-8 ದಿನ ಶಿಸ್ತಿನ ಕ್ಯಾಂಪಿನ ತರಬೇತಿಯಿಂದ ಕ್ಷೀಣಿಸಿದ್ದ ಶರೀರದಿಂದ ಮೊದಲ ಬಾರಿಗೆ ರಕ್ತದಾನ ಮಾಡಿದರೂ ನಾನು ಸಹಿತ ಉಳಿದ ಕೆಡೆಟ್‌ಗಳು ಆರಾಮವಾಗಿಯೇ ಇದ್ದೆವು. ಹಾಗಾಗಿ ಆ ರಕ್ತದಾನ ಸ್ವತಃ ನನಗೂ ಮತ್ತು ಇತರ ಕೆಡೆಟ್‌ಗಳಿಗೂ ಮುಂಬರಲಿರುವ ದಿನಗಳಲ್ಲಿ ರಕ್ತದಾನ ಮಾಡಲು ಸ್ಪೂರ್ತಿ ನೀಡುವುದು ಖಂಡಿತ.

ಆ ದಿನ ರಕ್ತದಾನ ಮಾಡಿದ ಕೆಡೆಟ್‌ಗಳಿಗೆ ಕಷ್ಟ ಆಗುವಂತಹ ಯಾವ ಡ್ಯೂಟಿ ಕೊಡಬೇಡಿ ಅಂತ ಸಿ.ಓ ಸಾಬ್‌ನ ನಿರ್ದೇಶನವಿತ್ತು. ಹಾಗಾಗಿ ಆ ದಿನ ಇನ್ನಷ್ಟೂ ಆರಾಮದಾಯಕವಾಗಿತ್ತು.

  • ಈ ದಿನ ಸಂಜೆ ಕ್ಯಾಂಪ್‌ಗೆ ಅಧಿಕೃತ ವಿದಾಯ. ಹಾಗಾಗಿ ಎಲ್ಲಾ ಕಂಪನಿಯವರ ಸಾಂಸ್ಕೃತಿಕ ಕಾರ್ಯಕ್ರಮ ಮೊದಲಾಗಿ ಸಭಾ‌ಕಾರ್ಯಕ್ರಮ ಏರ್ಪಾಡಾಗಿತ್ತು. 









  • ಈ ದಿನ ರಾತ್ರಿ ನಾವು ಕ್ಯಾಂಪ್ ಕಚೇರಿಗೆ ಭೇಟಿ ನೀಡಿ ನಮ್ಮ TA/DA ಲೆಕ್ಕಾಚಾರ ಮುಗಿಸಿಕೊಂಡೆವು.

ಕ್ಯಾಂಪ್‌ನ ಹತ್ತನೇಯ ದಿನದಲ್ಲಿ ನಡೆದ ಪ್ರಮುಖ ಚಟುವಟಿಕೆಗಳು :

  • ಈ ದಿನ ಕ್ಯಾಂಪ್‌ನಲ್ಲಿ ಯಾವುದೇ ಕಾರ್ಯಕ್ರಮ ಇರಲಿಲ್ಲ. ಹಾಗಾಗಿ ಎಲ್ಲರೂ ಬೆಳಿಗ್ಗೆ 06.00 ಗಂಟೆಯ ತನಕ ನಿದ್ದೆ ಮಾಡಿದರು. ನಂತರ 07.30 ರ ಸುಮಾರಿಗೆ ಬೆಳಿಗ್ಗಿನ ಉಪಾಹಾರಕ್ಕೆ ಹೋದೆವು. ಆ ದಿನ ನಮ್ಮ‌19 Karnataka Battalion ಬಿಟ್ಟು ಉಳಿದ ಎಲ್ಲಾ ಬೆಟಾಲಿಯನ್‌‌ನ ಕೆಡೆಟ್‌ಗಳು ಕ್ಯಾಂಪ್‌ ಬಿಟ್ಟು ಮನೆಗೆ ಹೊರಡುತ್ತಿದ್ದರು. ಆದರೆ ನಮಗೆ ಊರಿಗೆ ಹಿಂತಿರುಗುವ ಬಸ್ ಒಂದು ದಿನ ತಡವಾಗಿರುವ ಕಾರಣದಿಂದ ನಾವು 50 ಕೆಡೆಟ್‌ಗಳು ಅಲ್ಲೇ ಉಳಿಯುವಂತಾಯ್ತು. ವಿಶಾಲವಾದ ಆಳ್ವಾಸ್ ಕಾಲೇಜು ಕ್ಯಾಂಪಸ್‌ನೊಳಗೆ ನಡೆದಾಡಿದೆವು. ಹಗಲು ಸ್ವಲ್ಪ ಹೊತ್ತು ನಿದ್ದೆ ಮಾಡಿದೆವು. ಹೇಗೋ ರಾತ್ರಿ ಊಟದ ಹೊತ್ತು ಬಂದಿತು. ಆ ದಿನ ನಮಗಾಗಿ ನಮ್ಮ‌ ಮಡಿಕೇರಿ ಸಿ.ಓ ಸಾಬ್ ಕರ್ನಲ್ ಚೇತನ್ ಧಿಮಾನ್‌ರ ನೇತೃತ್ವದಲ್ಲಿ ಸರಳವಾಗಿ ದೀಪಾವಳಿ ಆಚರಣೆಗೆ ವ್ಯವಸ್ಥೆ ಮಾಡಿಕೊಟ್ಟಿದ್ದರು.


  • ಸಾಬ್‌ನ ವತಿಯಿಂದ ಸಿಹಿತಿಂಡಿ, ಜ್ಯೂಸ್ ಕೊಡಿಸಿದ್ದರು. ಆಡಿಟೋರಿಯಂ‌ನಲ್ಲಿ ದೀಪ ಬೆಳಗಿಸಿ ಸಂಭ್ರಮಿಸಿದೆವು. ಅದು ಆ ಕ್ಯಾಂಪ್‌ನ ಕೊನೆಯ ದಿನ. ಹಾಗಾಗಿ ಅಲ್ಲಿಯ ತೆರೆದ ಆಡಿಟೋರಿಯಂ‌ನಲ್ಲಿ ಕೊಡವ ವಾಲಗ, ಜಾನಪದ ಪದ್ಯಗಳನ್ನಿಟ್ಟು ಕುಣಿದೆವು. ಗಂಟೆ ಸುಮಾರು 09.00 ದಾಟಿತ್ತು. ಕುಣಿದು ಎಷ್ಟು ಆಯಾಸವಾಗಿತ್ತೆಂದರೆ… ಒಂದು ಕಿಲೋಮೀಟರ್ ದೂರದ ಹಾಸ್ಟೆಲ್‌ಗೆ ಕಾಲೆಳೆಯುವಷ್ಟು ತ್ರಾಣವಿರಲಿಲ್ಲ. ನಮ್ಮ ಸ್ಥಿತಿಯರಿತ ಸಿ.ಓ ಸಾಬ್ ನಮ್ಮನ್ನು ಆರ್ಮಿ ಟ್ರಕ್‌ನಲ್ಲಿ ಹಾಸ್ಟೆಲ್‌ಗೆ ತಲುಪಿಸಲು ಆದೇಶಿಸಿದರು. ಹಾಸ್ಟೆಲ್ ತಲುಪಿದ ಮೇಲೆ ಸ್ನಾನಾದಿ ಕೆಲಸಗಳನ್ನು ಮುಗಿಸಿ ನಮ್ಮ ಬ್ಯಾಗ್‌ಗಳನ್ನು ಎಲ್ಲಾ ತುಂಬಿಸಿದೆವು. ನಾವು ಇದ್ದ ರೂಂಗಳನ್ನು ಪೂರ್ವಸ್ಥಿತಿಗೆ ಶುಚಿಗೊಳಿಸಿದೆವು. ಆರಾಮವಾಗಿ ನಿದ್ರಿಸಿದೆವು. 

CATC II - Alva's Moodabidri


Charlie Company

ಕ್ಯಾಂಪ್‌ನ ಕೊನೆಯ ಹಗಲು :

  • ಮರುದಿನ ನಿಧಾನವಾಗಿ ಎದ್ದು ಮನೆಗೆ ಹೊರಡಲು ಆರಾಮವಾಗಿ ತಯಾರಾದೆವು. ಬ್ಯಾಗನ್ನು ಎತ್ತಿಕೊಂಡು ಉಪಹಾರಕ್ಕೆ ಹೋದೆವು. ನಂತರ ಮಡಿಕೇರಿಯಿಂದ ಇನ್ನೊಂದು ಮುಂದಿನ ಕ್ಯಾಂಪ್‌ಗೆ ಕೆಡೆಟ್‌ಗಳನ್ನು ಕರೆದು ತರುವ ನಮ್ಮ ಬಸ್‌ನ ಬರುವಿಕೆಗಾಗಿ ಕಾದೆವು. ಸುಮಾರು 12.30 ರ ಹೊತ್ತಿಗೆ ಬಸ್ ಬಂತು. ನಮ್ಮ ಕಾಲೇಜಿನ ಮತ್ತು ಬೆಟಾಲಿಯನ್‌‌ನ ಇತರೆ ಕೆಡೆಟ್‌ಗಳಿಗೆ ಶುಭಾಶಯಗಳನ್ನು ತಿಳಿಸಿದೆವು. ನಮ್ಮ ಅನುಭವಗಳನ್ನು, ಸಲಹೆಗಳನ್ನು ಹಂಚಿಕೊಂಡೆವು. ಮಧ್ಯಾಹ್ನದ ಊಟ ಮುಗಿಸಿ, ನಮ್ಮ ಕಾಲೇಜಿನಿಂದ ಆರ್.ಡಿ.ಸಿ ಸೆಲೆಕ್ಷನ್‌‌ನಲ್ಲಿ ಮುಂದುವರಿಯುತ್ತಿದ್ದ ಕೆಡೆಟ್‌ಗಳಿಗೆ ಶುಭಾಶಯಗಳನ್ನು ಹೇಳಿ 2 ಗಂಟೆಯ ಸುಮಾರಿಗೆ ಬಸ್ ಹತ್ತಿ ಊರಿಗೆ ಹೊರಟೆವು….


  19 Kar Bn, Madikeri cadets with Commanding Officer Col. Chethan Dhiman

SGT. Abhijith KJ

KAR/19/SD/A/387679

NMC-NCC-Sullia

National Cadet Corps, Nehru Memorial College Sullia Unit, Under 19 Karnataka Battalion Madikeri. The National Cadet Corps is the youth wing of the Indian Armed Forces with its headquarters in New Delhi, which trains and motivates the youth of our country to become a disciplined person and help him join the armed forces if he wishes to.

No comments:

Post a Comment